'ಅಂಬೆ' - ಮಹಾಭಾರತ ಓದುವರನ್ನು ಕಾಡುವ ದುರಂತ ನಾಯಕಿ, ಅಂಬೆಯ ದುರಂತ ಇರುವುದು ಅರ್ಹತೆ, ಹಕ್ಕು ಎಲ್ಲಾ ಇದ್ದೂ, ತನ್ನ ಯಾವುದೇ ತಪ್ಪಿಲ್ಲದೆ ತನ್ನದೆಲ್ಲವನ್ನೂ ಒಂದೊಂದಾಗಿ ಕಳೆದುಕೊಳ್ಳುವ ದೌರ್ಭಾಗ್ಯದಲ್ಲಿ, ಆಕೆಯದು 'ಯಾರ ಲೀಲೆಗೋ ಯಾರೋ ಏನೋ ಗುರಿ ಇರದೇ ಎಸೆದ ಬಾಣಕ್ಕೆ ಬಲಿಯಾದ ಬದುಕು. ಆಕೆ ರಾಜನೊಬ್ಬನ ಹಿರಿಯ ಮಗಳು, ಹುಟ್ಟಿನಿಂದಲ್ಲದೆ ಬದುಕಿನಿಂದಲೂ ಕ್ಷತ್ರಿಯಳು, ಅಂತಃಪುರದಾಚೆಗೆ ಯುದ್ಧರಂಗದಲ್ಲೂ, ತನ್ನ ಬದುಕು ವಿಸ್ತರಿಸಿಕೊಂಡವಳು. ಮತ್ತೊಬ್ಬ ರಾಜನಿಗೆ ಮನಸೋತವಳು. ಅವನಿಗೆ ವರಮಾಲೆ ಹಾಕುವ ಒಂದು ಕ್ಷಣ ಮೊದಲು ತನ್ನ ಹಕ್ಕನ್ನು ಕಳೆದುಕೊಂಡವಳು. ಅದೇ ಪರಿಸ್ಥಿತಿ ಅವಳ ತಂಗಿಯರಿಗೂ ಬರುತ್ತದೆ. ಅವರು ತಮಗೊದಗಿದ ಸ್ಥಿತಿಯನ್ನು ತಮ್ಮ ದೌರ್ಭಾಗ್ಯ ಎಂದು ಕಣ್ಣೀರಿನೊಡನೆ ಸಹಿಸಿಕೊಳ್ಳುತ್ತಾರೆ. ಇವಳು ಆ ಪ್ರತಿಕೂಲ ಪರಿಸ್ಥಿತಿಯೆದುರು ನಿಂತು ಹೋರಾಡುತ್ತಾಳೆ, ಬಡಿದಾಡುತ್ತಾಳೆ, ನ್ಯಾಯ ಕೇಳುತ್ತಾಳೆ. ಅಂಬೆಯ ಪಾತ್ರ ಗೆಲ್ಲುವುದು ಇಲ್ಲಿ. ಆ ಹೋರಾಟದಲ್ಲಿ ಪ್ರತಿಯೊಂದು ನಿರಾಕರಣೆಯ ನಂತರವೂ ಅವಳ ಹೆಣ್ತನ ಕಳಚಿಕೊಳ್ಳುತ್ತಾ ಹೋಗುತ್ತದೆ, ಅವಳ ದುರಂತ ಇರುವುದು ಇಲ್ಲಿ. ರಾಜಕುಮಾರಿ ಅಂಬೆಯ ಪಯಣ ಈ ನಾಟಕದ ವಸ್ತು. ಅಂದಿನಿಂದ ಇಂದಿನವರೆಗೂ ನಮ್ಮೆದುರಲ್ಲಿರುವ ಹಲವಾರು ಅಂಚೆಗಳು ಈ ನಾಟಕದ ನಾಯಕಿಯರು.
























