top of page

PANCHAVATI

DHANVANTARI ACADEMY FOR MANAGEMENT STUDIES

Monday, February 23, 2026

BENGALURU
SOURABHA 2026

ವನವಾಸದ ಕಾಲದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರು ದಂಡಕಾರಣ್ಯದಲ್ಲಿ ಸಂಚರಿಸುತ್ತಾ ಪಂಚವಟಿಗೆ ಆಗಮಿಸುತ್ತಾರೆ. ಗೋದಾವರಿ ನದೀತೀರದ ಈ ಸುಂದರ ಪ್ರದೇಶದಲ್ಲಿ ಅವರು ಒಂದು ಆಶ್ರಮ ನಿರ್ಮಿಸಿ ನೆಲೆಸುತ್ತಾರೆ. ಅರಣ್ಯದ ಶಾಂತ ವಾತಾವರಣದಲ್ಲಿ ದಿನಗಳು ಸಾಗುತ್ತಿರುವಾಗ, ಅಲ್ಲಿ ರಾಕ್ಷಸಿ ಶೂರ್ಪನಕಿ ಬರುತ್ತಾಳೆ. ರಾಮನ ರೂಪಕ್ಕೆ ಮೋಹಗೊಂಡು ಅವನನ್ನು ವಿವಾಹವಾಗಲು ಬೇಡಿಕೆ ಇಡುತ್ತಾಳೆ. ರಾಮನು ವಿನಯದಿಂದ ನಿರಾಕರಿಸಿದಾಗ, ಆಗ ಲಕ್ಷ್ಮಣನು ಅವಳ ದರ್ಪವನ್ನು ತಡೆದು, ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸುತ್ತಾನೆ.


ಈ ಅವಮಾನಕಾರಿ ಘಟನೆ ಬಗ್ಗೆ ಶೂರ್ಪನಕಿ ತನ್ನ ಸಹೋದರ ರಾವಣನಿಗೆ ತಿಳಿಸುತ್ತಾಳೆ. ರಾವಣನು ಪ್ರತೀಕಾರ ತೀರಿಸಿಕೊಳ್ಳಲು ಹಾಗೂ ಸೀತೆಯನ್ನು ಅಪಹರಿಸುವ ದುಷ್ಟ ಯೋಜನೆ ರೂಪಿಸುತ್ತಾನೆ. ಈ ಕಾರ್ಯಕ್ಕೆ ಮಾರೀಚನ ಸಹಾಯವನ್ನು ಪಡೆಯುತ್ತಾನೆ. ಮಾರೀಚನು ಮಾಯಾಜಿಂಕೆಯ ರೂಪ ತಾಳಿ, ಪಂಚವಟಿಯ ಆಶ್ರಮದ ಮುಂದೆ ಕಾಣಿಸಿಕೊಳ್ಳುತ್ತಾನೆ. ಆ ಜಿಂಕೆಯ ಸೌಂದರ್ಯಕ್ಕೆ ಆಕರ್ಷಿತಳಾದ ಸೀತೆ ಅದನ್ನು ಹಿಡಿದು ತರಲು ರಾಮನನ್ನು ಕಳುಹಿಸುತ್ತಾಳೆ. ರಾಮನು ಜಿಂಕೆಯನ್ನು ಬೆನ್ನಟ್ಟುತ್ತಾ ದೂರ ಹೋಗುತ್ತಾನೆ. ಮಾರೀಚನು ರಾಮನ ಧ್ವನಿಯಲ್ಲಿ “ಹಾ ಸೀತೆ!” ಎಂದು ಕೂಗಿ ಬಿದ್ದು ಸಾಯುತ್ತಾನೆ.


ಆ ಧ್ವನಿಯನ್ನು ಕೇಳಿ ಭಯಗೊಂಡ ಸೀತೆ, ಲಕ್ಷ್ಮಣನನ್ನು ರಾಮನ ಸಹಾಯಕ್ಕೆ ಕಳುಹಿಸುತ್ತಾಳೆ. ಲಕ್ಷ್ಮಣನು ಅತ್ತಿಗೆಯ ಮಾತಿನಂತೆ ಅನಿವಾರ್ಯವಾಗಿ ರಾಮನನ್ನು ಹುಡುಕಲು ಹೋಗುವಾಗ, ರೇಖೆ ಎಳೆದು ಸೀತೆಗೆ ರಕ್ಷಣೆಯ ಸೂಚನೆ ನೀಡುತ್ತಾನೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ರಾವಣನು ಸನ್ಯಾಸಿಯ ವೇಷದಲ್ಲಿ ಬಂದು, ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದುಕೊಂಡು ಹೋಗುತ್ತಾನೆ. ಸೀತೆಯನ್ನು ಕರೆದೊಯ್ಯುವ ವೇಳೆ, ಗರುಡವಂಶದ ಜಟಾಯು ರಾವಣನನ್ನು ತಡೆದು ಯುದ್ಧ ಮಾಡುತ್ತಾನೆ. ಆದರೆ ರಾವಣನ ಶಕ್ತಿಗೆ ಸೋತು, ಗಂಭೀರವಾಗಿ ಗಾಯಗೊಂಡು ಜಟಾಯು ಪ್ರಾಣ ತ್ಯಜಿಸುತ್ತಾನೆ.


ಬಳಿಕ ರಾಮ ಮತ್ತು ಲಕ್ಷ್ಮಣರು ಮರಳಿ ಪಂಚವಟಿಗೆ ಬಂದು, ಸೀತೆ ಕಾಣೆಯಾಗಿರುವುದನ್ನು ತಿಳಿದು ದುಃಖಪಡುತ್ತಾರೆ. ಜಟಾಯುವಿನಿಂದ ಸೀತೆಯ ಅಪಹರಣದ ವಿಷಯ ತಿಳಿದುಕೊಂಡು, ಅವನ ಅಂತ್ಯಕ್ರಿಯೆಗಳನ್ನು ನೆರವೇರಿಸುತ್ತಾರೆ. ಸೀತೆಯ ಹುಡುಕಾಟದಲ್ಲಿ ಮುಂದುವರಿದ ರಾಮ–ಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಬರುತ್ತಾರೆ. ಭಕ್ತಿಯ ಪ್ರತೀಕವಾದ ಶಬರಿ, ರಾಮನಿಗಾಗಿ ಕಾಯುತ್ತಿರುತಾಳೆ . ಆಕೆ ಭಕ್ತಿಯಿಂದ ರುಚಿ ನೋಡಿ ನೀಡಿದ ಹಣ್ಣುಗಳನ್ನು ರಾಮ ಸ್ವೀಕರಿಸುತ್ತಾನೆ. ಶಬರಿಯ ಆಶೀರ್ವಾದವನ್ನು ಪಡೆದು, ಸೀತೆಯನ್ನು ಹುಡುಕುವ ಮಹಾಯಾತ್ರೆಯನ್ನು ರಾಮ–ಲಕ್ಷ್ಮಣರು ಮುಂದುವರಿಸುತ್ತಾರೆ.

  • Facebook
  • Instagram
  • Youtube

© 2024 Rangasourabha | Kannada Theatre

bottom of page