ವ್ಯೂಹಮುದ್ರ ನಾಟಕವು ಸಂಸ್ಕೃತದ ವಿಶಾಖದತ್ತರ 'ಮುದ್ರರಾಕ್ಷಸ' ನಾಟಕದ ಕನ್ನಡ ಅವತರಣಿಕೆ. ಮೌರ್ಯ ಸಂಸ್ಥಾನವನ್ನು ಸದೃಢಗೊಳಿಸಲು ವಿಷ್ಣುಗುಪ್ತ ಚಾಣಕ್ಯ ಮಾಡುವ ರಾಜಕೀಯ ತಂತ್ರಗಳೇ ಈ ಕಥೆಯ ಆಧಾರ. ನಂದ ವಂಶದ ವಿನಾಶದ ನಂತರ ಚಂದ್ರಗುಪ್ತನು ರಾಜ ಸಿಂಹಾಸನವನ್ನೇರುತ್ತಾನೆ. ಆದರೆ ನಂದರ ನಿಷ್ಠಾವಂತ ಮಂತ್ರಿಯಾಗಿದ್ದ ರಾಕ್ಷಸನು ಚಂದ್ರಗುಪ್ತನ ಆಳ್ವಿಕೆಯನ್ನು ಖಂಡಿಸಿ ನಂದ ಅನುಯಾಯಿಗಳನ್ನು ಒಗ್ಗೂಡಿಸಿ ಆತನನ್ನು ಸೋಲಿಸಲು ನಾನಾ ಹೊಂಚುಗಳನ್ನು ಮಾಡುತ್ತಾನೆ. ಚತುರ ಚಾಣಕ್ಯನು ಎಲ್ಲವನ್ನು ನಿಧಾನವಾಗಿ ಪರಿಹರಿಸುತ್ತಾ, ಚಂದ್ರಗುಪ್ತನನ್ನು ರಕ್ಷಿಸುತ್ತಾ ರಾಕ್ಷಸನ ಚಿಂತೆಗೆ ಕಾರಣನಾಗುತ್ತಾನೆ. ನಂದರ ಮರಣದ ನಂತರವೂ ಅವರಿಗೆ ಇಷ್ಟು ನಿಷ್ಠಾವಂತನ್ನಾಗಿರುವ ಬುದ್ಧಿವಂತ ರಾಕ್ಷಸನು ಚಾಣಕ್ಯನಮೆಚ್ಚುಗೆಗೆ ಪಾತ್ರವಾಗುತ್ತಾನೆ. ರಾಕ್ಷಸನಿಗಿಂತ ಸೂಕ್ತ ಮಂತ್ರಿ ಚಂದ್ರಗುಪ್ತನಿಗೆ ಸಿಗಲಾರ ಎಂಬ ಅವನ ನಂಬಿಕೆ ಚಾಣಕ್ಯನಿಗೆ. ಇದಕ್ಕಾಗಿ ರಾಕ್ಷಸನ ಸುತ್ತ ಒಂದು ವ್ಯೂಹವನ್ನೇ ಹೆಣೆಯುತ್ತಾನೆ. ಅನಿರೀಕ್ಷಿತವಾಗಿ ಕೈ ಸೇರಿದ ರಾಕ್ಷಸನ ಮುದ್ರಿಕೆ ನಾಟಕದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಚಾಣಕ್ಯ ಕಟ್ಟುವ ಪಾತ್ರಗಳು - ತಂತ್ರಗಳಿಂದಾಗಿ ರಾಕ್ಷಸನು ತಾನು ಕಟ್ಟಿದ ಸೈನ್ಯದಿಂದಲೇ ದೂರಾಗುತ್ತಾನೆ. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ರಾಕ್ಷಸನ ಕಡೆಯವರು ಎಂದು ತೋರುವ ಜನರೂ ಚಾಣಕ್ಯನ ಗೂಢಾಚಾರರೇ ಆಗಿರುತ್ತಾರೆ. ಪ್ರತಿ ಹಂತದಲ್ಲೂ ಎದ್ದು ತೋರುವ ಚಾಣಕ್ಯನ ಬುದ್ಧಿಮತ್ತೆ ನಾಟಕದ ಸ್ವಾದವನ್ನು ಹೆಚ್ಚಿಸುತ್ತಾ ಹೋಗುತ್ತದೆ. ತಾನು ಸೋತಾಗಿದೆ, ಕನಿಷ್ಠ ಪಕ್ಷ ತನಗಾಗಿ ಪ್ರಾಣವನ್ನೇ ಓತ್ತೆಯಿಡಲು ಹೊರಟಿರುವ ಸ್ನೇಹಿತನನ್ನು ಉಳಿಸಿಕೊಳ್ಳಲೇಬೇಕೆಂಬ ಹಠ ತೊಟ್ಟು ಹೋಗಿ ಚಾಣಕ್ಯನ ಮುಂದೆ ನಿಲ್ಲುತ್ತಾನೆ ರಾಕ್ಷಸ. ಶರಣು ಬಂದ ರಾಕ್ಷಸನಿಗೆ ಚಾಣಕ್ಯನು ಕೊಡುವುದು ಎರೆಡೇ ಆಯ್ಕೆ - ಸ್ನೇಹಿತನ ಸಾವು ಅಥವಾ ಚಂದ್ರಗುಪ್ತ ಮಂತ್ರಿ ಪದವಿ. ನಿಷ್ಠಾವಂತ ರಾಕ್ಷಸನ ಆಯ್ಕೆ ಸ್ನೇಹಿತನ ಉಳಿವು - ಮೌರ್ಯ ಸಾಮ್ರಾಜ್ಯದ ಮಂತ್ರಿ ಪದವಿ. ಈ ನಾಟಕದ ಜೀವಾಳ ರಾಜತಂತ್ರ - ರಾಜನ ಒಳಿತಿಗೆ, ರಾಜ್ಯದ ಸುಭಿಕ್ಷತೆಗೆ, ಪ್ರಜೆಗಳ ಸಂತುಷ್ಟ ಬದುಕಿಗೆ ದಾರಿ ಕಂದುಕೊಳ್ಳುವುದೇ ಈ ಕಥೆಯ ವಸ್ತುರೂಪ.
























