top of page

JNATAPARVA

SREE DAKSHA ACADEMY

Monday, February 23, 2026

BENGALURU
SOURABHA 2026

ಇದು ಪಾಂಡವರು ಅಜ್ಞಾತವಾಸದಲ್ಲಿದ್ದಾಗ ನಡೆದ ಒಂದು ಪ್ರಮುಖ ಘಟನೆಯನ್ನಾಧರಿಸಿದ ಕಥಾ ಹಂದರ. ಅವರು 13ನೇ ವರ್ಷದ ಅಜ್ಞಾತವಾಸದಲ್ಲಿದ್ದಾಗ ತಮ್ಮ ನಿಜ ಗುರುತನ್ನು ಮರೆಮಾಡಿಕೊಂಡು ವಿರಾಟನ ಅರಮನೆಯಲ್ಲಿ ಕೆಲಸವನ್ನು ಮಾಡಿಕೊಂಡು ವಾಸಿಸುತ್ತಿದ್ದರು. ಅವರ ಜೊತೆಗೆ ದ್ರೌಪದಿ ಕೂಡ ಸೈರಂದ್ರಿ ಎಂಬ ಹೆಸರಿನಿಂದ ರಾಣಿ ಸುದೇಷ್ಣೆಯ ಸೇವಕಿಯಾಗಿದ್ದಳು.


ವಿರಾಟನ ಸೇನಾಧಿಪತಿಯಾಗಿದ್ದ ಸುದೇಷ್ಣೆಯ ತಮ್ಮ ಕೀಚಕನು ತನ್ನ ಶಕ್ತಿ ಮತ್ತು ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದನು. ಅವನು ಎಷ್ಟು ಬಲಾಢ್ಯನೋ ಅಷ್ಟೇ ದುಷ್ಟ, ದುರುಳ ಮತ್ತು ಕಾಮುಕನಾಗಿದ್ದ. ರಾಜ್ಯದ ಯಾವ ಸುಂದರ ಸ್ತ್ರೀಯನ್ನೂ ಕಾಮಿಸದೇ ಬಿಡುತ್ತಿರಲಿಲ್ಲ. ಇಂಥವನ ಕಣ್ಣು ಸುಂದರಿ ದ್ರೌಪದಿಯ ಮೇಲೆ ಬೀಳುತ್ತದೆ. ಅವಳನ್ನು ನೋಡಿದಾಗ ಅವನಲ್ಲಿ ಮೂಡುವ ಭಾವನೆ ಪ್ರೇಮವೋ ಕಾಮವೋ ಎಂಬುದನ್ನು ತಿಳಿಯದಾಗುತ್ತಾನೆ. ಅವಳ ಸೌಂದರ್ಯಕೆ ಮೋಹಿತನಾಗಿ ಆಕೆ ವಿವಾಹಿತಳಾಗಿದ್ದರೂ ಅವಳನ್ನು ಪಡೆಯಲೇಬೇಕೆಂದು ಕಾಮಾಂಧನಾಗಿ ಅವಳ ಮೇಲೆ ಎರಗುತ್ತಾನೆ. ಅವನನ್ನು ತಿರಸ್ಕರಿಸಿದ ದ್ರೌಪದಿಯನ್ನು ತುಂಬಿದ ವಿರಾಟನ ಸಭೆಯಲ್ಲಿ ನಿಂದಿಸಿ ಅವಮಾನಿಸುತ್ತಾನೆ. ದ್ರೌಪದಿಗೆ ಅವನನ್ನು ಕೂಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲವೆಂದು ಗರ್ವದಿಂದ ನುಡಿಯುತ್ತಾನೆ.


ವಿಪರ್ಯಾಸವೆಂದರೆ ಆ ಘಟನೆ ಪಾಂಡವರ ಕಣ್ಣಮುಂದೆಯೇ ನಡೆಯುತ್ತದೆ. ಆದರೂ ಧರ್ಮಜನ ಮಾತಿಗೆ ಕಟ್ಟುಬಿದ್ದು ಅವರ್ಯಾರೂ ಅವಳ ಸಹಾಯಕ್ಕೆ ಬರುವುದಿಲ್ಲ. ಇದರಿಂದ ಹತಾಶಳಾದ ದ್ರೌಪದಿಯು ಹಿಂದೆ ಕುರುಸಭೆಯಲ್ಲಿ ನಡೆದ ವಸ್ತ್ರಾಪಹರಣವನ್ನು ನೆನೆದು ದುಃಖಿಸುತ್ತಾಳೆ. ಕೀಚಕನನ್ನು ಸಂಹರಿಸಲು ಅವಳು ಭೀಮನನ್ನು ಪ್ರಚೋದಿಸುತ್ತಾಳೆ. ಆಗ ಭೀಮನು ಅವನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ದ್ರೌಪದಿಗೆ ಅವನನ್ನು ನಾಟ್ಯಶಾಲೆಗೆ ಬರುವಂತೆ ಮಾಡಲು ಹೇಳುತ್ತಾನೆ. ನಾಟ್ಯಶಾಲೆಗೆ ಬಂದ ಕೀಚಕನೊಂದಿಗೆ ಭೀಮನು ಯುದ್ಧ ಮಾಡಿ  ಅವನನ್ನು ಸಂಹರಿಸುತ್ತಾನೆ. ಮುಂದೇನಾದರೂ ತೊಂದರೆ ಎದುರಾದರೆ ತಮ್ಮ ಗುಪ್ತನಾಮಗಳನ್ನು ಬಳಸೋಣ ಎಂದು ನಿರ್ಧರಿಸುತ್ತಾರೆ.


ಕೀಚಕನ ಸಾವಿನ ವಿಚಾರವನ್ನು ಭೀಮನು ವಿರಾಟನಿಗೆ ಮತ್ತು ಸುದೇಷ್ಣೆಗೆ ತಿಳಿಸಿ ತನ್ನ ಅಜ್ಞಾತದ ವೇಷದಲ್ಲಿ ಪಾಕಶಾಲೆಗೆ ಸೇರುತ್ತಾನೆ. ದುಃಖಿತಳಾದ ಸುದೇಷ್ಣೆ ಕೀಚಕನ ಸಾವಿನ ವಿಚಾರವನ್ನು ಹೊರಗೆಲ್ಲೂ ಹರಡದಂತೆ ಮತ್ತು ಗುಟ್ಟಾಗಿ ಅದೇ ರಾತ್ರಿ ಅಂತ್ಯಕ್ರಿಯೆ ಮುಗಿಸುವಂತೆ ಆದೇಶಿಸುತ್ತಾಳೆ. ಸೈರಂಧ್ರಿಯ ಸೌಂದರ್ಯವೇ ಕೀಚಕನ ಸಾವಿಗೆ ಕಾರಣವೆಂದು ತಿಳಿದು ಅವಳನ್ನು ತಕ್ಷಣ ಹೊರಡುವಂತೆ ಹೇಳುತ್ತಾಳೆ. ಅವಳನ್ನು ತಡೆದ ಉಪಕೀಚಕರು ಕೀಚಕನ ಕೊನೆಯ ಆಸೆ ತೀರಿಸಲು ಅವನ ದೇಹದೊಂದಿಗೆ ಸೈರಂಧ್ರಿಯನ್ನು ಚಿತೆಗೆ ಕಟ್ಟಿ ಸುಡಲು ಮುಂದಾಗುತ್ತಾರೆ. ಆಗ ಅವಳು ಪಾಂಡವರ ಗುಪ್ತನಾಮಗಳನ್ನು ಕೂಗುತ್ತಾಳೆ. ಮತ್ತೊಮ್ಮೆ ಅವಳ ರಕ್ಷಣೆಗೆ ಬರುವ ಭೀಮ ಗಂಧರ್ವ ವೇಷದಲ್ಲಿ ಉಪಕೀಚಕರೆಲ್ಲರನ್ನೂ ಕೊಲ್ಲುತ್ತಾನೆ. ಕೊನೆಯಲ್ಲಿ ದ್ರೌಪದಿ ಕೀಚಕನ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಾಳೆ. ಪರಸ್ತ್ರೀಯರನ್ನು ಕಾಮಿಸಿದವನ ಗತಿ ಏನಾಗುತ್ತದೆ ಎಂಬುದನ್ನು ತಿಳಿಸುವ ಮೂಲಕ ನಾಟಕಕ್ಕೆ ತೆರೆ ಬೀಳುತ್ತದೆ.

  • Facebook
  • Instagram
  • Youtube

© 2024 Rangasourabha | Kannada Theatre

bottom of page