top of page

ODYSSEY

DAYANAND SAGAR COLLEGE OF ENGINEERING

Thursday, February 12, 2026

BENGALURU
SOURABHA 2026

ಈ ನಾಟಕವು ಇಥಾಕಾ ದ್ವೀಪದ ಜನರು ಹಾಗೂ ಮ್ಯೂಸ್‌ಗಳ ಆಹ್ವಾನದಿಂದ ಆರಂಭವಾಗುತ್ತದೆ. ಒಡಿಸ್ಸಿಯಸ್ ಎಂಬ ವೀರನ ಕಥೆಯನ್ನು ಜೀವಂತವಾಗಿ ಹೇಳಲು ಮ್ಯೂಸ್‌ಗಳು ಧ್ವನಿ ನೀಡುತ್ತಾರೆ. ಒಡಿಸ್ಸಿಯಸ್ ಇಥಾಕಾ ದ್ವೀಪದ ರಾಜ. ಟ್ರಾಯ್ ಯುದ್ಧ ಆರಂಭವಾದಾಗ, ಒಡಿಸ್ಸಿಯಸ್ ತನ್ನ ಪತ್ನಿ ಪೆನೆಲೋಪಿ ಮತ್ತು ಮಗ ಟೆಲಿಮ್ಯಾಕಸ್ ಅವರನ್ನು ಬಿಟ್ಟು ಯುದ್ಧಕ್ಕೆ ಹೊರಡುತ್ತಾನೆ. ಪೆನೆಲೋಪಿ ಧೈರ್ಯದಿಂದ ಇಥಾಕಾವನ್ನು ಮತ್ತು ಮಗನನ್ನು ಕಾಪಾಡುವ ಹೊಣೆ ಹೊರುತ್ತಾಳೆ. ಹತ್ತು ವರ್ಷಗಳ ಯುದ್ಧದ ನಂತರ, ಒಡಿಸ್ಸಿಯಸ್ ತನ್ನ ಬುದ್ಧಿಯಿಂದ ಮರದ ಕುದುರೆಯ ಯುಕ್ತಿಯನ್ನು ರೂಪಿಸಿ ಟ್ರಾಯ್ ಯುದ್ಧವನ್ನು ಗೆಲ್ಲುತ್ತಾನೆ. ಆದರೆ ಮನೆಗೆ ಮರಳುವ ಪ್ರಯಾಣದಲ್ಲಿ ಅವನು ಅನೇಕ ಸಂಕಷ್ಟಗಳನ್ನು ಎದುರಿಸುತ್ತಾನೆ. ಅವನು ಏಕಕಣ್ಣಿನ ದೈತ್ಯ ಪಾಲಿಫೇಮಸ್ ಅನ್ನು ಬುದ್ಧಿಯಿಂದ ಸೋಲಿಸುತ್ತಾನೆ. ಆದರೆ ತನ್ನ ನಿಜ ಹೆಸರು ಹೇಳಿಕೊಂಡ ಕಾರಣ, ಪೊಸೈಡನ್ ದೇವರ ಶಾಪಕ್ಕೆ ಗುರಿಯಾಗುತ್ತಾನೆ. ಇದರಿಂದ ಅವನ ಮನೆಗೆ ಮರಳುವ ದಾರಿ ದೀರ್ಘ ಮತ್ತು ಕಷ್ಟಕರವಾಗುತ್ತದೆ. ನಂತರ ಅವನು ಕಮಲದ್ವೀಪದಲ್ಲಿ ಸೈನಿಕರು ಮಾಯೆಯ ಹಣ್ಣಿನಿಂದ ಮೋಹಿತರಾಗುವುದನ್ನು ಕಂಡು ಅವರನ್ನು ರಕ್ಷಿಸುತ್ತಾನೆ. ಬಳಿಕ ಸಿರ್ಸೆ ರಾಣಿಯ ದ್ವೀಪದಲ್ಲಿ ಒಂದು ವರ್ಷ ತಂಗುತ್ತಾನೆ. ಸಿರ್ಸೆಯ ಸೂಚನೆಯಂತೆ ಅವನು ಪಾತಾಳ ಲೋಕಕ್ಕೆ ಹೋಗಿ ಸಂತ ಟೈರಿಸಿಯಸ್ ಅವರನ್ನು ಭೇಟಿಯಾಗಿ ಮುಂದಿನ ಪ್ರಯಾಣದ ಮಾರ್ಗವನ್ನು ತಿಳಿದುಕೊಳ್ಳುತ್ತಾನೆ. ಅಲ್ಲಿ ತನ್ನ ತಾಯಿಯನ್ನು ಭೇಟಿಯಾಗಿ ಕರ್ತವ್ಯದ ಮಹತ್ವವನ್ನು ಅರಿಯುತ್ತಾನೆ. ಮುಂದಿನ ಪ್ರಯಾಣದಲ್ಲಿ ಸೈರನ್ಸ್‌ಗಳ ಮಧುರ ಗಾಯನ, ಸಿಲಾ ಮತ್ತು ಖರಿಬ್ಡಿಸ್ ಎಂಬ ಭಯಾನಕ ಅಡೆತಡೆಗಳಿಂದ ಅವನು ಬಹುತೇಕ ಎಲ್ಲಾ ಸೈನಿಕರನ್ನು ಕಳೆದುಕೊಳ್ಳುತ್ತಾನೆ. ಕೊನೆಗೆ ಏಕಾಂಗಿಯಾಗಿ ಇಥಾಕಾ ತಲುಪುತ್ತಾನೆ. ದೇವಿ ಅಥೇನಾಳ ಸಲಹೆಯಂತೆ, ಒಡಿಸ್ಸಿಯಸ್ ಭಿಕ್ಷುಕನ ವೇಷದಲ್ಲಿ ಅರಮನೆಗೆ ಪ್ರವೇಶಿಸುತ್ತಾನೆ. ಅಲ್ಲಿ ಪೆನೆಲೋಪಿಯನ್ನು ಮದುವೆಯಾಗಲು ಬಂದಿರುವ ದುಷ್ಟ ವರಾರ್ತಿಗಳು ಅರಮನೆಯನ್ನು ಕಾಡುತ್ತಿರುವುದನ್ನು ಕಾಣುತ್ತಾನೆ. ಪೆನೆಲೋಪಿ ಷರತ್ತು ಇಡುತ್ತಾಳೆ—ಒಡಿಸ್ಸಿಯಸ್‌ನ ಬಿಲ್ಲಿನಿಂದ ಹನ್ನೆರಡು ಕೊಡಲಿಗಳ ರಂಧ್ರಗಳನ್ನು ದಾಟಿಸಿ ಬಾಣ ಬಿಡುವವನೇ ತನ್ನ ಪತಿ. ಎಲ್ಲ ವರಾರ್ತಿಗಳು ವಿಫಲರಾಗುತ್ತಾರೆ. ಭಿಕ್ಷುಕನಾದ ಒಡಿಸ್ಸಿಯಸ್ ಮಾತ್ರ ಯಶಸ್ವಿಯಾಗುತ್ತಾನೆ. ಅವನು ತನ್ನ ನಿಜ ಸ್ವರೂಪವನ್ನು ಬಹಿರಂಗಪಡಿಸಿ, ಮಗ ಟೆಲಿಮ್ಯಾಕಸ್ ಜೊತೆಗೂಡಿ ದುಷ್ಟ ವರಾರ್ತಿಗಳನ್ನು ಸಂಹರಿಸುತ್ತಾನೆ. ಪೆನೆಲೋಪಿ ವಿವಾಹ ಹಾಸಿಗೆಯ ರಹಸ್ಯದ ಮೂಲಕ ಅವನು ನಿಜವಾಗಿಯೂ ಒಡಿಸ್ಸಿಯಸ್ ಎಂದು ಖಚಿತಪಡಿಸಿಕೊಳ್ಳುತ್ತಾಳೆ. ನಾಟಕವು ಒಡಿಸ್ಸಿಯಸ್ ಕುಟುಂಬ ಪುನರ್ಮಿಲನದೊಂದಿಗೆ ಅಂತ್ಯಗೊಳ್ಳುತ್ತದೆ. ಈ ನಾಟಕವು ಬುದ್ಧಿ ಶಕ್ತಿ, ಸಹನೆ, ನಿಷ್ಠೆ, ಮತ್ತು ಕರ್ತವ್ಯಗಳ ಮಹತ್ವವನ್ನು ಸಾರುತ್ತದೆ.

  • Facebook
  • Instagram
  • Youtube

© 2024 Rangasourabha | Kannada Theatre

bottom of page