ಮಹಾಭಾರತ ಯುದ್ಧದ ಕಡೆಯ ದಿನದ ರುದ್ರ-ಭಯಾನಕ ದೃಶ್ಯ ಈ ಏಕಾಂಕದ ಕಥಾವಸ್ತು, ಭೀಮನಿಗೂ ದುರ್ಯೋಧನನಿಗೂ ಭೀಕರ ಗದಾ ಯುದ್ಧ ನಡೆದಿದೆ. ಕೃಷ್ಣ, ಬಲರಾಮ, ಪಾಂಡವರು ನೋಡುತ್ತ ನಿಂತಿದ್ದಾರೆ. ನಾಟಕದ ಪ್ರಾರಂಭಕ್ಕೆ ರಣಾಂಗಣದಲ್ಲಿ ಸುಳಿದಾಡುತ್ತಿರುವ ಮೂವರು ಭಟರು ಗದಾಯುದ್ಧವನ್ನು ಬಹು ಚೆನ್ನಾಗಿ ಬಣ್ಣಿಸುತ್ತಾರೆ. ಜಯಾಪಜಯಗಳು ತಕ್ಕಡಿಯಲ್ಲಿ ತೂಗಾಡುತ್ತಿದ್ದರೂ ಭೀಮನ ಕಾಯಬಲಕ್ಕಿಂತ ದುರ್ಯೋಧನನ ಯುದ್ಧ ಕೌಶಲವೇ ಮೇಲುಗೈಯೆನಿಸುತ್ತದೆ.
ನೋಡುನೋಡುತ್ತಿರುವಾಗಲೇ ಕೃಷ್ಣನು ತೊಡೆ ತಟ್ಟಿ ಭೀಮನಿಗೆ ಸನ್ನೆ ಕೊಡುತ್ತಾನೆ. ತಟ್ಟನೆ ಭೀಮನು ದುರ್ಯೋಧನನ ತೊಡೆಗಳಿಗೆ ಹೊಡೆದು ನೆಲಕ್ಕೆ ಕೆಡುಹುತ್ತಾನೆ; ಗೆದ್ದು ಬಿಡುತ್ತಾನೆ.
ಗದಾಯುದ್ಧದ ನಿಯಮಕ್ಕೆ ವಿರುದ್ಧವಾಗಿದೆ ಊರುಭಂಗ, ಧರ್ಮಯುದ್ಧ ಗೈವ ವೀರರು ಎಂದೂ ಸೊಂಟದ ಕೆಳಗೆ ತೊಡೆಗೆ ಹೊಡೆಯುವಂತಿಲ್ಲ. ದುರ್ಯೋಧನನ ಪಕ್ಷಪಾತಿಯಾದ ಬಲರಾಮನು ಕೋಪದಿಂದ ಕಿಡಿಕಿಡಿಯಾಗುತ್ತಾನೆ. ಭೀಮಾದಿಗಳನ್ನೆಲ್ಲ ತನ್ನ ಹಲಾಯುಧದಿಂದ ತೀರಿಸಿಬಿಡುವೆನೆಂದು ಆರ್ಭಟಿಸುತ್ತಾನೆ. ಆದರೆ ದುರ್ಯೋಧನನಿಗೇ ಈಗ ಜ್ಞಾನೋದಯವಾಗಿದೆ; ಪಶ್ಚಾತ್ತಾಪ ಬಂದಿದೆ. ನೂರ್ವರು ತಮ್ಮಂದಿರೂ ಸತ್ತು, ತಾನೂ ಸಾಯಲಿರುವಾಗ, ಪಾಂಡವರ ಮೇಲೆ ಪ್ರತೀಕಾರದಿಂದ ಅವನಿಗೆ ಯಾವ ಪ್ರಯೋಜನವೂ ಕಾಣುವುದಿಲ್ಲ. ಅವನೇ ಬಲರಾಮನನ್ನು ದುಡುಕದಂತೆ ತಡೆಯುತ್ತಾನೆ.
ಇಷ್ಟರಲ್ಲಿ ದುರ್ಯೋಧನನ್ನು ಹುಡುಕುತ್ತ ಅವನ ಪುಟ್ಟ ಮಗ ದುರ್ಜಯ,. ತಾಯಿ ಗಾಂಧಾರಿ, ತಂದೆ ಧೃತರಾಷ್ಟ್ರ, ರಣಭೂಮಿಗೆ ಬರುತ್ತಾರೆ. ಅಲ್ಲಿ ಹತದೇಹಗಳ ರಾಶಿಯ ನಡುವೆ ಹುಡುಗನೇ ಇವನನ್ನು ಮೊದಲು ಕಂಡು ಮಾತಾಡಿಸುತ್ತಾನೆ. ಅರಿಯದ ಆ ಮಗು ತಂದೆಯ ತೊಡೆಯೇರಲು ಬಯಸುವ ಸನ್ನಿವೇಶ ಯಾರ ಕಣ್ಣಲ್ಲಿಯೂ ನೀರು ತರಿಸುವಂತಹದು ಬಾಲನ ಮುಗ್ಧ ಸ್ವಭಾವ, ಎಲ್ಲರನ್ನೂ ಕಳೆದುಕೊಂಡು ಗೋಳಿಡುವ ಧೃತರಾಷ್ಟ್ರ ಗಾಂಧಾರಿಯರ ಪುತ್ರಶೋಕ. ಇವೆಲ್ಲಕ್ಕಿಂತ ನಾಟಕದ ಸ್ವಾರಸ್ಯವಡಗಿರುವುದು ದುರ್ಯೋಧನನ ಪಾತ್ರದ ಉಜ್ವಲ ಚಿತ್ರದಲ್ಲಿ. ಭಾಸನು ಇಲ್ಲಿ ಅವನನ್ನು ಉದಾತ್ತ ಯುದ್ಧವೀರನನ್ನಾಗಿ ಮಾಡಿದ್ದಾನೆ? ಅವನ ಪಿತೃಭಕ್ತಿ, ಪುತ್ರಸ್ನೇಹ, ಹಿರಿಯರ ಮೇಲಿನ ಗೌರವ, ವೀರವರ್ತನೆ, ಅಭಿಮಾನ ಪೂರ್ಣತೆ, ಇವು ಬಹಳ ಸಾರವತ್ತಾಗಿ ವ್ಯಕ್ತವಾಗುತ್ತವೆ. ರೋಷಾ ವೇಶದಿಂದ ಧಾವಿಸುವ ಅಶ್ವತ್ಥಾಮನ ಪ್ರತೀಕಾರ ಕೂಡ ಈ ದುರ್ಯೋಧನನಿಗೆ ಬೇಡದ ವಿಷಯ. ತಾನು ಅಧರ್ಮ ಮಾಡಿದ ಮೇಲೆ ಪಾಂಡವರ ಅಧರ್ಮವೂ ಸರಿಯೇ ಎಂದು ಅವನ ವಾದ. ಹೀಗೆ ಸಂಸ್ಕೃತ ನಾಟಕ ಇತಿಹಾಸದಲ್ಲಿ ದುರ್ಯೋಧನನನ್ನು ಗ್ರೀಕ್ ನಾಟಕ ಗಳಲ್ಲಿ ಬರುವ ದುರಂತ ನಾಯಕನಂತೆ ಸ್ಪಷ್ಟಾಕ್ಷರಗಳಲ್ಲಿ ಚಿತ್ರಿಸಿರುವ ಈ ಭಾಸನಾಟಕ ಅವನ ಮಹಾಪ್ರತಿಭೆಗೆ ಒಂದು ಉಜ್ವಲ ನಿದರ್ಶನ ನಾಟಕ ಕುರುಕುಲಾರ್ಕನ ಅಸ್ತ್ರಮಯದಲ್ಲಿ ಮುಗಿಯುತ್ತದೆ.
























