ಕನ್ನಡದ ಹೆಸರಾಂತ ನಾಟಕಕಾರಲ್ಲಿ ಒಬ್ಬರಾದ ಹೆಚ್.ಎಸ್. ಶಿವಪ್ರಕಾಶ್ ರವರ ಬಹು ಚರ್ಚಿತ ನಾಟಕ ಮಹಾಚೈತ್ರ, ಕನ್ನಡ ರಂಗಭೂಮಿಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು ಕವಿಯಾಗಿ, ನಾಟಕಕಾರರಾಗಿ ಹೆಚ್. ಎಸ್. ಪ್ರಕಾಶ್ ರವರ ಕೊಡುಗೆ ಅನನ್ಯ ಅವರ ಹೆಸರಾಂತ ನಾಟಕಗಳು ಸುಲ್ತಾನ ಟಿಪ್ಪು, ಶೇಕ್ಸಪಿಯರನ್ ಸ್ಪಪ್ನಗಳು, ಮಂಟೆಸ್ವಾಮಿ ಕಥಾ ಪ್ರಸಂಗ, ಮಾದಾರಿ ಚೆನ್ನಯ್ಯ, ಸತಿ, ಚಂದ್ರಪಾಸ ಮುಂತಾದವುಗಳು. ಅವರ ಅನೇಕ ನಾಟಕಗಳು ಮತ್ತು ಕವಿತೆಗಳು ಬೇರೆ ಭಾಷೆಗಳಿಗೂ ಅನುವಾದಗೊಂಡಿದೆ.
ಹೆಚ್.ಎಸ್.ಶಿವಪ್ರಕಾಶರ "ಮದುವೆ ಹೆಣ್ಣು" ನಾಟಕವು ಜಪಾನಿನ ರೌದ್ರನಾಟಕ ಪರಂಪರೆಯಾದ ನೋ.ನಾಟಕ ಕೃತಿಯ ಸುರಚನೆ ಹೊಂದಿದೆ. ಇಲ್ಲಿ ದುರಂತ ಈಗಾಗಲೇ ನಡೆದು ಹೋಗಿದೆ. ಇಡೀ ನಾಟಕ ಆ ದುರಂತವನ್ನು ಪುನರಭಿನಯಿಸುತ್ತಾ ಮಹಾಕರುಣೆಯ ಮೂಲವಾದ ಸ್ವೀಕೃತಿಯ ಸ್ಥಿತಿಯನ್ನು ಮುಚ್ಚುತ್ತದೆ. ಈ ನಾಟಕಕ್ಕೆ ತೋಂಡ ಬುಡಕಟ್ಟಿನ ಒಬ್ಬ ಮದುವಣಿಗೆ ತನ್ನ ಮದುವೆಗೆ ಪೂರ್ವಭಾವಿಯಾಗಿ ತನ್ನ ಬುಡಕಟ್ಟಿನ ನಿಯಮಗಳ ಅನುಸಾರ ವಧುದಕ್ಷಿಣೆಗಾಗಿ ಗಂಡಾಳಿನ ಬರುಡೆಯನ್ನು ಬೇಟೆಯಾಡುತ್ತಾ ಹೊರಟ. ಗಂಡಾಳು ಸಿಕ್ಕದೇ ಹೋಗಿ ದಾರಿಯಲ್ಲಿ ಸಿಕ್ಕ ಹೆಣ್ಣುಮಗಳನ್ನು ಕೊಂದು ಅವಳನ್ನು ಮಾವನಿಗೆ ಒಪ್ಪಸಿದಾಗ ಅವನಿಗೆ ಗೊತ್ತಾಯಿತು. ಅವನು ತನ್ನ ವಧುವನ್ನೇ ವಧೆ ಮಾಡಿಕೊಂಡಿದ್ದಾನೆ. ಎಂದು ಈ ಕಾರಣದಿಂದ ಕುಲದಿಂದ ಬಹಿಷ್ಕೃತನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ಪಾಪಪ್ರಜ್ಞೆಯಿಂದ, ಹೊರಬರಲಾಗದೆ ಪ್ರೇತಾತ್ಮನಾಗಿ ನರಳುತ್ತಿರುತ್ತಾನೆ. ಬೌದ್ಧ ಸನ್ಯಾಸಿನಿ ಸಮಣೆ ಕ್ಷಮಿಸಿ ಮುಕ್ತಿಯ ಮಾರ್ಗವನ್ನು ಅವನಿಗೆ ತೋರಿಸುತ್ತಾಳೆ. ಇದಿಷ್ಟು ಕಥಾ ಹಂದರ.
ಪಾಪಪುಣ್ಯ ಪ್ರಜ್ಞೆಗಳು ನೋಡುವ ಕಾಲ ಮತ್ತು ನೋಡುವವರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ಪಾಪವಿವೇಚನೆಯೇ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಕ್ಷಮೆಯಿಂದ ಭವಿಷ್ಯದ ಪಯಣ ನಿರಾಳ, ಪಶುತ್ವದಿಂದ ಮನುಷ್ಯತ್ವ, ಪಾಪದಿಂದ ಪುಣ್ಯ, ಹಿಂಸೆಯಿಂದ ಅಹಿಂಸೆ, ಅಪೂರ್ಣತೆಯಿಂದ ಪೂರ್ಣತೆ, ಕತ್ತಲಿನಿಂದ ಬೆಳಕು, ವಿಕೃತಿಯಿಂದ ಪ್ರಕೃತಿ ಮಾನವ ಶ್ರಮಿಸಬೇಕಾದ ಹಾದಿ ಎಂಬ ತತ್ವವನ್ನು ನಾಟಕವು ಅಭಿವ್ಯಕ್ತಿಸುತ್ತದೆ.
























