ಈಡಿಪಸ್ ಪ್ರಾಚೀನ ಗ್ರೀಕ್ ಪುರಾಣಗಳಲ್ಲಿನ ನಾಯಕ ಶಿಖಾಮಣಿಗಳಲ್ಲೊಬ್ಬ. ಇವನ ವೃತ್ತಾಂತ ಅತ್ಯಂತ ಭಯಾನಕವೂ ರೋಮಾಂಚಕಾರವೂ ಸಮಸ್ಯಾತ್ಮಕವೂ ಜಟಿಲವೂ ದುರಂತಮಯವೂ ಆಗಿದೆ. ಗ್ರೀಕ್ ಪುರಾಣದ ಪ್ರಕಾರ ಈಡಿಪಸ್ ಥೀಬ್ಸ್ ರಾಜ್ಯದ ದೊರೆ. ಗೊತ್ತಿಲ್ಲದೆ ತಂದೆಯನ್ನೇ ಕೊಂದು ತಾಯಿಯನ್ನೇ ಮದುವೆಯಾದ ವ್ಯಕ್ತಿ. ಈಡಿಪಸ್ ಥೀಬ್ಸ್ನ ದೊರೆಯಾಗಿ ಸಾಯುವತನಕ ರಾಜ್ಯಭಾರ ಮಾಡಿದನಾದರೂ ತಮ್ಮಿಬ್ಬರಿಗೂ ಇರುವ ಸಂಬಂಧದಲ್ಲಿನ ಸತ್ಯ ತಿಳಿದಾಗ ಅವನ ತಾಯಿ ಹೇಗೆ ನೇಣುಹಾಕಿಕೊಂಡಳು ಎಂಬುದನ್ನು ಹೋಮರ್ ಕವಿಯೇ ಉಲ್ಲೇಖಿಸುತ್ತಾನೆ.ಈಡಿಪಸ್ ಹಲವು ಬಗೆಯಲ್ಲಿ ವಿಸ್ಮಯಕರ ಕೃತಿಯಾಗಿದೆ. ಮೊದಲನೆಯದಾಗಿ ಈ ನಾಟಕದ ರಚನೆ ಕೆಲವೇ ಗಂಟೆಗಳ ಘಟನೆಗಳನ್ನು ಇದು ನಮ್ಮ ಮುಂದಿಡುತ್ತದೆ. ನಾವು ನಾಟಕದೊಂದಿಗೆ ಮುಂದೆ ಹೋದಂತೆಲ್ಲ ಈಡಿಪಸ್ನ ಹಿಂದಿನ ಕಥೆ ನಮ್ಮೆದುರು ಹಾಸಿಕೊಳ್ಳುತ್ತ ಹೋಗುತ್ತವೆ; ಆತನ ಅತ್ಯಂತ ರುದ್ರ ಗಳಿಗೆ ಸ್ಪಷ್ಟಗಳಿಗೆಗಳಾಗುತ್ತ ಹೋಗುತ್ತವೆ. ಈಡಿಪಸ್ ರಾಜನಾದವನು; ಈತ ತನ್ನ ಅಸಂಖ್ಯ ಪ್ರಜೆಗಳೊಂದಿಗೆ ವ್ಯವಹರಿಸಬೇಕಾಗಿರುವಂತೆಯೇ ತನ್ನ ವೈಯಕ್ತಿಕ ಕಷ್ಟಗಳೊಂದಿಗೆ ಸೆಣಸಬೇಕಾಗಿದೆ; ಇದು ನಾಟಕದ ಧೋರಣೆಯ ವೈವಿಧ್ಯಕ್ಕೆ ಸಹಾಯಮಾಡುತ್ತದೆ.
























