ನಮ್ಮ ರಾಜ್ಯದ ಹೆಮ್ಮೆಯ ವೃಕ್ಷಮಾತೆಯಾದ ಸಾಲುಮರದ ತಿಮ್ಮಕ್ಕನವರು ಸುಮಾರು ೮೦ಕ್ಕೂ ಹೆಚ್ಚು ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಇಡೀ ವಿಶ್ವಕ್ಕೆ ಮಾದರಿಯಾಗಿರುವಂತಹ ವ್ಯಕ್ತಿ. ಬಡತನದ ಬೇಗೆಯನ್ನು ಲೆಕ್ಕಿಸದೆ ಗಿಡಗಳ ಪಾಲನೆಯೇ ಜೀವನದ ಮಹಾಕಾಯಕವೆಂದು ಭಾವಿಸಿ ಇಳಿ ವಯಸ್ಸಿನಲ್ಲೂ ಪರಿಸರ ಸಂರಕ್ಷಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಇವರ ಸೇವೆಯು ಅನನ್ಯ ಹಾಗೂ ಅವಿಸ್ಮರಣೀಯವಾದುದು. ನಮ್ಮ ನಾಡಿಗೆ, ನಮ್ಮ ಪರಿಸರಕ್ಕೆ ಅಪೂರ್ವ ಸೇವೆ ನೀಡಿದಂತಹ ತಿಮ್ಮಕ್ಕನವರ ಕುರಿತಾದ ನಾಟಕವೇ "ಸಾಲು ಮರಗಳ ತಾಯಿ ತಿಮ್ಮಕ್ಕ". ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕವು ತಿಮ್ಮಕ್ಕನವರ ಅರ್ಥಪೂರ್ಣ ಜೀವನದ ಬಗ್ಗೆ ಹೇಳುತ್ತಲೇ ಪರಿಸರದ ಕಾಳಜಿ, ಹಸಿವು, ಬಡತನ, ಜಾತಿ ವ್ಯವಸ್ಥೆ, ಜೀತ ಪದ್ಧತಿ, ಹೆಣ್ಣು ಮಕ್ಕಳ ಸಂಕಷ್ಟದ ಬಗ್ಗೆಯೂ ಮಾತನಾಡುತ್ತದೆ. ಈ ಎಲ್ಲಾ ಅಂಶಗಳನ್ನು ನಿರ್ದೇಶಕರಾದ ಡಾ||ಬೇಲೂರು ರಘುನಂದನ್ ಅವರು ಅಚ್ಚುಕಟ್ಟಾಗಿ ರಂಗದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ೧ ಘಂಟೆ ೩೦ ನಿಮಿಷ ಇರುವಂತಹ ಈ ನಾಟಕವು ಪ್ರೇಕ್ಷಕರ ಮನದಲ್ಲಿ ಪರಿಸರ ವಿಷಯದ ಬೀಜವನ್ನು ಬಿತ್ತುವಂತದ್ದಾಗಿದೆ. ೩೧ ಜನರ ಪರಿಶ್ರಮದೊಂದಿಗೆ ರಂಗವೇರಲು ಸಿದ್ಧವಾಗಿರುವ ಈ ನಾಟಕವನ್ನು ಕಾಜಾಣ ತಂಡವು ನಿರ್ಮಿಸಿದೆ. ಡಾ|| ಬೇಲೂರು ರಘುನಂದನ್ ಅವರು ಈ ನಾಟಕಕ್ಕೆ ರಂಗಪಠ್ಯ ಬರೆದು, ನಿರ್ದೇಶನ ಮಾಡಿದ್ದಾರೆ. ತಿಮ್ಮಕ್ಕನವರ ಜೊತೆ ಹಾಗೂ ಮಗ ಉಮೇಶ ಅವರೊಂದಿಗೆ ಚರ್ಚಿಸಿ, ಮತ್ತು ಅವರ ಕುರಿತಾದ ಲೇಖನಗಳನ್ನು ಆಧಾರವಾಗಿ ಇಟ್ಟುಕೊಂಡು ಈ ರಂಗಪಠ್ಯವನ್ನು ಸಿದ್ಧಪಡಿಸಲಾಗಿದೆ.
























